ಜಗನ್ನಾಥ
ಭಾರತದ ಪುಣ್ಯಕ್ಷೆÃತ್ರಗಳಲ್ಲಿ ಒಂದು. ಕಾಶಿ, ರಾಮೇಶ್ವರಗಳಂತೆ ಹಿಂದೂಗಳಿಗೆ ಪವಿತ್ರ ಯಾತ್ರಾಸ್ಥಳ. ಇದು ಒರಿಸ್ಸದ ಹಿಂದಿನ ರಾಜಧಾನಿಯಾಗಿದ್ದ ಪುರಿಯಲ್ಲಿದೆ. ಇದರ ಸುತ್ತಮುತ್ತ ಸುಮಾರು ೩೨ ಕಿ.ಮೀ. ಪ್ರದೇಶವೆಲ್ಲ ಪವಿತ್ರವಾದುದೆಂಬ ನಂಬುಗೆ ಇದೆ. ಇದು ಮದ್ರಾಸ್, ಕಲ್ಕತ್ತ ರೈಲುದಾರಿಯಲ್ಲಿ ಮದ್ರಾಸಿನಿಂದ ಈಶಾನ್ಯಕ್ಕೆ ಬಂಗಾಳ ಕೊಲ್ಲಿಯ ತೀರದಲ್ಲಿ ಸುಮಾರು ೧,೨೩೫ ಕಿಮೀ. ದೂರದಲ್ಲಿದೆ.

ಊರಿಗೆ ತನ್ನ ಹೆಸರನ್ನಿತ್ತ ಜಗನ್ನಾಥ ದೇವಾಲಯವನ್ನು ಕ್ರಿ.ಶ. ಹನ್ನೆರಡನೆಯ ಶತಮಾನದಲ್ಲಿ ಆ ಪ್ರದೇಶವನ್ನಾಳುತ್ತಿದ್ದ ಪೂರ್ವ ಗಂಗವಂಶದ ಅನಂತವರ್ಮ (೧೦೭೮-೧೧೫೦) ಚೋಡಗಂಗರಾಜ ಕಟ್ಟಿಸಿದ. ಪ್ರಾಚೀನ ಕರ್ನಾಟಕದಿಂದ ಅಲ್ಲಿ ರಾಜ್ಯ ಕಟ್ಟಿದ ಕನ್ನಡ ರಾಜವಂಶವಿದೆಂದು ಇತಿಹಾಸಕಾರರ ಅಭಿಪ್ರಾಯ. ೬೫೦ ಚದರಡಿ ವಿಸ್ತಾರವುಳ್ಳ ಈ ದೇಗುಲದಲ್ಲಿ ಗರ್ಭಗುಡಿ, ನವರಂಗ ಮತ್ತು ಮೊಗಸಾಲೆ ಹೀಗೆ ಮೂರು ಭಾಗಗಳಿವೆ. ಗರ್ಭಗುಡಿಯ ಮೇಲಿನ ಶಿಖರದ ಎತ್ತರ ೧೯೨'. ಈ ಮಂದಿರದಲ್ಲಿ ಶ್ರಿÃಕೃಷ್ಣನ ವಿಗ್ರಹವಲ್ಲದೆ ಬಲಭದ್ರ ಮತ್ತು ಸುಭದ್ರೆಯರ ವಿಗ್ರಹಗಳೂ ಅಕ್ಕಪಕ್ಕಗಳಲ್ಲಿ ಒಂದು ನೂರ ಇಪ್ಪತ್ತು ಇತರ ದೇವಾಲಯಗಳೂ ಇವೆ.

ಗಿರಿಜನರಿನಿಂದ ಪೂಜೆಗೊಳ್ಳುತ್ತಿದ್ದ ಜಗನ್ನಾಥ ಇಂದ್ರದ್ಯುಮ್ನನೆಂಬ ರಾಜನಿಗೆ ಕನಸಿನಲ್ಲಿ ಕಾಣಿಸಿಕೊಂಡು ಈಗಿರುವ ಸ್ಥಳದಲ್ಲಿ ತನ್ನನ್ನು ಪ್ರತಿಷ್ಠಾಪಿಸಬೇಕೆಂದು ಅನುಗ್ರಹಿಸಿದನೆಂದು ಒಂದು ಐತಿಹ್ಯವಿದ್ದರೆ, ಮತ್ತೊಂದು ಈ ರಾಜ ದೇವತೆಗಳ ಬಡಗಿ ವಿಶ್ವಕರ್ಮನಿಂದಲೇ ಈ ಮೂರ್ತಿಯನ್ನು ಮಾಡಿಸಿ ಪ್ರತಿಷ್ಠಾಪಿಸಿದನೆಂದೂ ಬ್ರಹ್ಮನೇ ಜಗನ್ನಾಥನಿಗೆ ಪ್ರಪ್ರಥಮವಾಗಿ ಅರ್ಚನಾಕೈಂರ‍್ಯವನ್ನೆಸಗಿದನೆಂದೂ ಸೂಚಿಸುತ್ತದೆ. ವಿಗ್ರಹ ಮಾತ್ರ ಬುಡದಲ್ಲಿ ದಪ್ಪನಾಗಿದ್ದು ಮೇಲಕ್ಕೆ ಹೋದಂತೆ ಚೂಪಾಗಿರುವ ಮರದ ಮೂರ್ತಿಯಾಗಿದೆ. ಒರಟು ಒರಟಾಗಿ ಕೆತ್ತಿದಂತಿರುವುದನ್ನು ನೋಡಿದರೆ ಪ್ರಾಯಶಃ ಇದು ಪೂರ್ವದಲ್ಲಿ ಗಿರಿಜನ ಬುಡಕಟ್ಟೊಂದರ ಆರಾಧ್ಯದೈವವಾಗಿದ್ದಂತೆ ತೋರುತ್ತದೆ. ಅಭಿಷೇಕ ಅಭ್ಯಂಜನಾದಿಗಳಿಂದ ಕಪ್ಪಾಗಿರುವ ಈ ಮೂರ್ತಿಯನ್ನು ದೂರದಿಂದ ನೋಡಿದಾಗ ಕರಿಯ ಕಲ್ಲಿನಿಂದ ಮಾಡಿದುದೆಂದೂ ಭ್ರಮಿಸುವ ಸಾಧ್ಯತೆಯಿದೆ. ನಿತ್ಯಚಂಚಲೆಯಾದ ಹೆಂಡತಿ ಲಕ್ಷಿö್ಮ, ಮೂರು ಲೋಕವನ್ನೂ ಸೂರೆಗೊಳ್ಳುವ ಮತ್ತು ಹಿಡಿತಕ್ಕೆ ದಕ್ಕದ (ದರ್ನಿವಾರ) ಮಗ ಪ್ರದ್ಯುಮ್ನ ಹಾವಿನ ಹಾಸಿಗೆ, ಅದರ ವೈರಿ ಗರುಡ ವಾಹನ, ಅಲ್ಲೊÃಲಕಲ್ಲೊÃಲವಾದ ಕಡಲು ವಸತಿ-ಹೀಗೆ ತನ್ನ ಮನೆವಾರ್ತೆಯನ್ನು ಪ್ರತಿನಿತ್ಯವೂ ನೆನೆದು ನೆನೆದು ಪೀಕಲಾಟಕ್ಕೆ ಸಿಕ್ಕಿ ಮರವಾಗಿ ಬಿಟ್ಟ ಮುರಾರಿ ಎಂದು ಹೇಳುವ ಸಂಸ್ಕೃತ ಶ್ಲೊÃಕವೊಂದುಂಟು (ಸ್ಮಾರಮ ಸ್ಮಾರಂ ಸ್ವಗೃತಚರಿತಂ ದಾರುಭೂತೋ ಮುರಾರಿಃ).

ಜಗನ್ನಾಥನ ವಿಗ್ರಹದೊಳಗಡೆ ಮೂಳೆಯ ಕಿರುಪೆಟ್ಟಿಗೆಯೊಂದನ್ನು ಇಟ್ಟಿರುತ್ತಾರೆ. ಇದು ಶ್ರಿÃಕೃಷ್ಣನ ಅಸ್ಥಿ ಎಂಬ ಐತಿಹ್ಯವಿದೆ. ಈಗ ಪೆಟ್ಟಿಗೆಯನ್ನು ಹನ್ನೆರಡು ವರ್ಷಕ್ಕೊಮ್ಮೆ ವಿಗ್ರಹದ ಒಳಗಡೆ ಇಡುವ ಪರಿಪಾಠವಿದೆ. ಈ ಆಧಾರದ ಮೇಲೆ ಇದು ಹಿಂದೆ ಬೌದ್ಧಸ್ತೂಪವೊಂದಿದ್ದ ಸ್ಥಳವಿರಬಹುದೆಂದೂ ಇಲ್ಲಿರುವ ತ್ರಿಮೂರ್ತಿಗಳು (ಕೃಷ್ಣ, ಬಲಭದ್ರ, ಸುಭದ್ರೆ) ಬೌದ್ಧ ತ್ರಿರತ್ನಗಳ (ಬುದ್ಧ, ಧಮ್ಮ, ಸಂಘ) ಪ್ರತೀಕವೆಂದೂ ಹೇಳುವುದುಂಟು. ಭಾರತದ ಮತ್ತಾವ ಹಿಂದೂ ದೇವಾಲಯದಲ್ಲೂ ಈ ಸಂಪ್ರದಾಯವಿಲ್ಲ. ಸ್ಪೃಶ್ಯಾಸ್ಪೃಶ್ಯ ಭಾವನೆಗೆ ಇಂತಿಷ್ಟೂ ಈ ಕ್ಷೆÃತ್ರದಲ್ಲಿ ಎಡೆಯಿಲ್ಲದಿರುವುದು ಈ ವಾದಕ್ಕೆ ಪುಷ್ಟಿ ಕೊಡುತ್ತದೆ.

ಪುರಿಯಲ್ಲಿ ಆಷಾಢ ಶುಕ್ಲ ಬಿದಿಗೆಯ ದಿನ ಮಹಾ ಮೇಳವೊಂದು ಸೇರುತ್ತದೆ. ಭಾರತದ ನಾನಾ ಕಡೆಗಳಿಂದ ಲಕ್ಷಾಂತರ ಯಾತ್ರಿಕರು ಬರುತ್ತಾರೆ. ಮೂರು ನಾಲ್ಕುಸಾವಿರ ಬ್ರಾಹ್ಮಣರು ಪೂಜಾಕಾರ್ಯದಲ್ಲಿ ನಿರತರಾಗಿರುತ್ತಾರೆ. ಸ್ನಾನ ಯಾತ್ರೆ, ಮರಳದಂಡೆಯ ಮೇಲೆ ೩ ಕಿ.ಮೀ.ಗಳ ದೂರ ಜಗನ್ನಾಥರಥ, ಬಲಭದ್ರರಥ ಮತ್ತು ಸುಭದ್ರಾರಥಗಳನ್ನು ಮೆರವಣಿಗೆಯಲ್ಲಿ ಎಳೆದೊಯ್ಯುವುದು-ಮಹಾಸಾಹಸದ ಅಂತೆಯೇ ವಿಜೃಂಬಣೆಯ ದೃಶ್ಯ. ಪುರಿಯ ಸಮೀಪದಲ್ಲಿರುವ ಖುರ್ದಾಪಟ್ಟಣದ ರಾಜರು ಪರಂಪರೆಯಿಂದ (೧೫೯೦) ಇಲ್ಲಿಯ ಪೂಜೆಗೆ ಹಕ್ಕುದಾರರು. ಪುರಿಯಲ್ಲಿ ಸ್ನಾನ ಮಾಡಿ ಕಡಲತೀರದ ಮಳಲ ಪ್ರಶಾಂತ ವಾತಾವರಣದಲ್ಲಿ ಕುಳಿತು ಜಗನ್ನಾಥನ ಧ್ಯಾನ ಮಾಡಿದರೆ ಸರ್ವಪಾಪವೂ ಕ್ಷಮಿಸಿ ಪುಣ್ಯ ಪ್ರಾಪ್ತಿಯಾಗುವುದೆಂದು ಭಕ್ತರ ನಂಬಿಕೆ. 											(ಸಿ.ಜಿ.ಪಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ